ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಅಜೆಕಾರು ಕಲಾಭಿಮಾನಿ ಬಳಗದ ಯಶಸ್ವೀ ಸರಣಿ ತಾಳಮದ್ದಳೆ

ಲೇಖಕರು : ಉದಯವಾಣಿ
ಶನಿವಾರ, ಜುಲೈ 27 , 2013
ಜುಲೈ ತಿಂಗಳಲ್ಲಿ ಮಳೆರಾಯನ ಆರ್ಭಟ ಪ್ರಾರಂಭವಾಗುತ್ತಲೇ ದಿನಾಂಕ 13.07.2013 ರಂದು ಅಜೆಕಾರು ಕಲಾಭಿಮಾನಿ ಬಳಗದ ಯುವ ಕಲಾವಿದರ ಸರಣಿ ತಾಳಮದ್ದಳೆ ಕಾರ್ಯಕ್ರಮವು ವಸಾಯಿ ಕನ್ನಡ ಸಂಘದ ಪ್ರಾಯೋಜಕತ್ವದಲ್ಲಿ ಪ್ರಾರಂಭವಾಯಿತು.

ವಸಾಯಿ ಕನ್ನಡ ಸಂಘ, ಘನ್ಸೋಳಿ ಮೂಕಾಂಬಿಕಾ ಮಂದಿರ, ಮುಲುಂಡ್‌ ಫ್ರೆಂಡ್ಸ್‌, ಜಯರಾಜನಗರ ಬೊರಿವಲಿ, ಕರ್ನಾಟಕ ಸಂಘ ಮಾಟುಂಗಾ, ಬಾಲ್ಕುಮ್‌, ಕಲ್ಯಾಣ್‌ ಕನ್ನಡ ಸಂಘ, ಗೀತಾ ಹಾಲ್‌ ಬಾಂಡೂಪ್‌, ಅಸಲ್ಫಾ ದತ್ತಾತ್ರೆಯ ಮೂಕಾಂಬಿಕಾ ಮಂದಿರ ಇಲ್ಲಿ ಕ್ರಮವಾಗಿ ಜಾಂಬವತಿ ಕಲ್ಯಾಣ, ವೀರಮಣಿ ಕಾಳಗ, ಶ್ರೀ ರಾಮ ನಿರ್ವಾಣ, ಪ್ರಚಂಡ ವಿಶ್ವಾಮಿತ್ರ, ವಾಲಿಮೋಕ್ಷ, ತ‌‌ರಣಿ ಸೇನಾ ಕಾಳಗ, ನಳದಮಯಂತಿ, ಕೃಷಾರ್ಜುನರ ಕಾಳಗ ಈ ರೀತಿ ಮುಂಬಯಿ ವಿವಿಧ ಪ್ರದೇಶಗಳಲ್ಲಿ ಒಂಭತ್ತು ತಾಳಮದ್ದಳೆ ಕಾರ್ಯಕ್ರಮಗಳು ಸಾದರಗೊಂಡವು.

ಕಳೆದ ಹತ್ತು ವರ್ಷಗಳಿಂದ ಮುಂಬಯಿ ಯಕ್ಷಗಾನ ಕಲಾರಸಿಕರಿಗೆ ಅಜೆಕಾರು ಕಲಾಭಿಮಾನಿ ಬಳಗ ತಾಳಮದ್ದಳೆಯ ರಸದೌತಣವನ್ನು ಉಣಿಸುತ್ತಾ ಬಂದಿದ್ದಾರೆ.

ನಾಲ್ಕೈದು ದಶಕಗಳ ಹಿಂದೆ ದೂರದರ್ಶನದಂತಹ ಸುಲಭ ಮನೋರಂಜನೆಯ ಸಾಧನಗಳು ಇಲ್ಲದಿರುವ ಕಾಲದಲ್ಲಿ ಮುಂಬಯಿ ಮಹಾನಗರದಲ್ಲಿ ಅನೇಕ ತಾಳಮದ್ದಳೆ ಸಂಘಗಳು ಆಸ್ತಿತ್ವದಲ್ಲಿದ್ದವು. ಅತ್ಯುತ್ತಮ ಅರ್ಥಧಾರಿ ಕಲಾವಿದರೂ ಇದ್ದರು. ಅಪರೂಪಕ್ಕೆ ಊರಿನ ಸುಪ್ರಸಿದ್ಧ ಕಲಾವಿದರು ಸ್ವಕಾರ್ಯ ನಿಮ್ಮಿತ್ತ ಮುಂಬಯಿಗೆ ಬಂದಾಗ ತಾಳಮದ್ದಳೆ ಕಾರ್ಯಕ್ರಮಗಳು ಜರಗುತ್ತಿದ್ದವು. ಶೇಣಿ, ಸಾಮಗರಂತಹ ಸುಪ್ರಸಿದ್ಧ ವೃತ್ತಿಪರ ಕಲಾವಿದರು ಬಂದಾಗಲೂ ಸ್ಥಳೀಯ ಕಲಾವಿದರು ಅವರ ಜೊತೆ ತಾಳಮದ್ದಳೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಬಯಲಾಟದಂತೆ ಇಡೀ ರಾತ್ರಿ ತಾಳಮದ್ದಳೆ ಕಾರ್ಯಕ್ರಮಗಳು ಜರಗುತ್ತಿದ್ದವು. ಆದರೆ ಇಡೀ ತಾಳಮದ್ದಳೆ ತಂಡವನ್ನು ಊರಿನಿಂದ ತರಿಸಿ ಕಾರ್ಯಕ್ರಮ ಸಂಯೋಜಿಸಿದ ಉದಾಹರಣೆ ಇಲ್ಲ.
ಪಲಿಮಾರು ಶ್ರೀಗಳು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.


ಮುಂಬಯಿಯ ಸಮರ್ಥ ಕಲಾವಿದರು ವಯೋಮಾನದಿಂದ, ಕಾರಣಾಂತರದಿಂದ ನೇಪಥ್ಯಕ್ಷೆ ಸರಿದಾಗ ಕೆಲಕಾಲ ಮುಂಬಯಿ ತಾಳಮದ್ದಳೆ ಕ್ಷೇತ್ರ ಸತ್ವಕಳಗೊಂಡಾಗ, ಅಜೆಕಾರು ಬಳಗ ಮುಂಬಯಿಗೆ ಸುಪ್ರಿಸಿದ್ಧ ಕಲಾವಿದವರನ್ನು ತರಿಸಿ ತಾಳಮದ್ದಳೆ ಕಾರ್ಯಕ್ರಮ ಸಂಯೋಜಿಸುವ ಉಪಕ್ರಮ ಹಮ್ಮಿಕೊಂಡಿತು. ಅಜೆಕಾರು ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿಯವರ ದಶಕದ ಪರಿಶ್ರಮ ಇದೀಗ ಸಾರ್ಥಕವಾಗಿದೆ.

ಈ ವರ್ಷ ಬಂದ ತಂಡದ ಭಾಗವತ ಗಿರೀಶ್‌ ರೈ ಕಕ್ಕೆಪದವು ಇವರು ಪ್ರತಿಭಾವಂತ ಯುವ ಭಾಗವತರು. ವಿದ್ಯಾ ಕೂಳ್ಯೂರು ಅವರ ತಂಡದಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಜರಗಿದ ಯಕ್ಷಗಾನ ತಂಡದಲ್ಲಿ ಭಾಗವಹಿಸಿದ ಯಶಸ್ವೀ ಕಲಾವಿದ ಹಾಗೂ ನಿಗರ್ವಿ. ಎಳೆಯ ವಯಸ್ಸಿನಲ್ಲಿ ಇವರು ಗಳಿಸಿದ ಪ್ರಸಿದ್ದಿ ಶ್ಲಾಘನೀಯ. ವಾರ್ಧಿಕ ಮತ್ತು ಭಾಮಿನಿ ಪದ್ಯಗಳ ಅಂತ್ಯದಲ್ಲಿ ಹಾಡುವ ಆಲಾಪನೆ ಆರೋಹಣ, ಆಲಾಪನೆಗೂ ಶೋತೃಗ‌ಳು ಚಪ್ಪಾಳೆ ತಟ್ಟಿ ಸ್ಪಂದಿಸುತ್ತಿದ್ದರು. ಇವರ ಹಾಡುಗಾರಿಕೆ ತೆಂಕುತಿಟ್ಟಿನ ಹಿರಿಯ ಭಾಗವತರನ್ನು ನೆನಪಿಸುತ್ತಿದ್ದವು. ಪ್ರಶಾಂತ ಶೆಟ್ಟಿ ವಗೆನಾಡು ಇವರು ಚೆಂಡೆಮದ್ದಳೆಗಳೆರಡರಲ್ಲೂ ತಮ್ಮ ಚುರುಕಿನ ಕೈಚಳಕವನು ಪ್ರದರ್ಶಿಸಿದ್ದಾರೆ. ಇವರು ಕಟೀಲು ಮೇಳದ ಅನುಭವೀ ಚೆಂಡೆವಾದಕರು. ಜೊತೆಯಲ್ಲಿ ಹರೀಶ್‌ ಸಾಲ್ಯಾನ್‌, ಸುರೇಶ್‌ ಶೆಟ್ಟಿ ಕಣಂಜಾರು ಇವರೂ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ.

ಇನ್ನು ಯುವ ಅರ್ಥಧಾರಿ ಕಲಾವಿದರ ಬಗ್ಗೆ ಎರಡು ವಾಕ್ಯ ಉಲ್ಲೇಖೀಸಲೇಬೇಕು. ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಆಟಕೂಟಗಳೆರಡರಲ್ಲೂ ನಿಸ್ಸೀಮನಾಗಿ ಮುಂಬಯಿ ಯಕ್ಷ ಕಲಾಭಿಮಾನಿಗಳಿಗೆ ಚಿರಪರಿಚಿತ ಕಲಾವಿದ. ಈ ಯುವ ಕಲಾವಿದನ ಅಸಾಧಾರಣ ಪ್ರತಿಭೆ, ಅದ್ಭುತ ವಾಗ್‌ವೈಖರಿ ಜೊತೆಯಲ್ಲಿ ಸಮರ್ಥ ರೀತಿಯ ಖಳಪಾತ್ರ ನಿರ್ವಹಣೆಯ ವಿನೂತನ ಶೈಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವೀಯಾಯಿತು. ದಿನೇಶ್‌ ಶೆಟ್ಟಿ ಕಾವಳಕಟ್ಟೆ ಇವರೂ ಆಟಕೂಟದ ಸವ್ಯಸಾಟಿ ಕಲಾವಿದರು. ಅರಳು ಹುರಿದಂತೆ ಮಾತಾಡುವ ಇವರು ಕಟೀಲು ಮೇಳದ ಸುಪ್ರಸಿದ್ಧ ಪುಂಡು ವೇಷಧಾರಿ.

ಸದಾಶಿವ ಆಳ್ವ ತಲಪಾಡಿ ವಿದ್ವತ್‌ ಭರಿತವಾದ ವಾಗ್‌ಲಹರಿ ಜೈಮಿನಿ ಭಾರತ, ರಾಮಾಶ್ವಮೇಧದಂತಹ ಪ್ರೌಢ ಕಾವ್ಯಗಳು ಇವರಿಗೆ ಮುಖೋದ್ಗತ. ಕಾವ್ಯಮಯ ವಾದ ತರ್ಕಬದ್ದವಾದ ಮಾತಿನಿಂದ ಇವರು ಶೋತೃಗಳನ್ನು ರಂಜಿಸಿದವರು. ಹರೀಶ್‌ ಭಟ್‌ ಬೊಳಂತಮೊಗರು ಇವರು ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನೀಯರ್‌. ಇವರು ಸೌಮ್ಯಪಾತ್ರಗಳು ಹಾಗೂ ಸ್ತ್ರೀ ಪಾತ್ರಗಳನ್ನು ಯಶಸ್ವೀಯಾಗಿ ನಿರ್ವಹಿಸಿದರು. ಇವರು ಮಾತುಗಾರಿಕೆಯಲ್ಲಿ ತಾತ್ವಿಕ ವಿಚಾರಗಳನ್ನು ಅತ್ಯಂತ ಸರಳ ರೀತಿಯಲ್ಲಿ ವಿವರಿಸುವ ಪರಿ ಅನನ್ಯ. ಈ ವರ್ಷದ ಹೊಸ ಸೇರ್ಪಡೆ ಶಿವಶಂಕರ ಭಟ್‌ ಇವರು ಕಟೀಲು ಮೇಳದ ಹಾಸ್ಯ ಕಲಾವಿದರು. ಆದರೆ ತಾಳಮದ್ದಳೆಯ ಹಾಸ್ಯಕ್ಕೂ ಬಯಲಾಟದ ಹಾಸ್ಯಕ್ಕೂ ವ್ಯತ್ಯಾಸವಿದೆ. ಯಾಕೆಂದರೆ ತಾಳಮದ್ದಳೆಯ ಪ್ರೇಕ್ಷಕರು ಪ್ರಬುದ್ಧರು. ಹಾಸ್ಯಗಾರನ ತಪ್ಪು ಉಚ್ಛಾರಣೆ, ರಾಜಪಾತ್ರ ಅದನ್ನು ಸರಿಪಡಿಸುವುದು ಇದು ಕಾಲಮಿತಿಯ ಕಾರ್ಯಕ್ರಮದಲ್ಲಿ ಸಮಯ ವ್ಯಯವಾಗುವುದೇ ವಿನಾಃ ಬೇರೇನೂ ಪ್ರಯೋಜನವಿಲ್ಲ. ಅವರು ಇನ್ನೂ ತಯಾರಾಗಬೇಕಾಗಿದೆ.

ದಿನಾಂಕ 21-07-2013 ರಂದು ಅಸಲ್ಫಾ ಮೂಕಾಂಬಿಕಾ ದತ್ತಾತ್ರೆಯ ಮಂದಿರದಲ್ಲಿ ಸಮಾರೋಪ ಕಾರ್ಯಕ್ರಮ ಉತ್ಸಾಹದಾಯಕ ವಾತಾವರಣದಲ್ಲಿ ಜರಗಿತು. ಬಂಟರ ಸಂಘ ಜೊಗೇಶ್ವರಿ ಬಾಂದ್ರಾ ವಲಯದ ಸ್ಥಳೀಯ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ದಿನೇಶ್‌ ಶೆಟ್ಟಿ ಕಾವಳಕಟ್ಟೆಯವರನ್ನು ನಗದು ಸಮೇತ ಸಮ್ಮಾನಿಸಲಾಯಿತು.

ಅಂದಿನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಕಲಾವಿದರಾಗಿ ರಾಜ್ಯ ಪ್ರಶಸ್ತಿ ವಿಜೇತ ಅರುವ ಕೊರಗಪ್ಪ ಶೆಟ್ಟಿಯವರು ಆಗಮಿಸಿದ್ದರು. ಭೀಮನ ಪಾತ್ರ ನಿರ್ವಹಿಸಿ, ಹೊಸ ಆಯಾಮವನ್ನು ನೀಡಿದರು. ಈ ಸಂದರ್ಭದಲ್ಲಿ ಕಲಾವಿದರನ್ನು ಮಂದಿರದ ವತಿಯಿಂದ ಸಮ್ಮಾನಿಸಲಾಯಿತು.



ಅಪ್ರತಿಮ ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ

ನಿಸರ್ಗ ರಮಣೀಯವಾಗಿ ಕಂಗೊಲಿಸುವ ಪಡುಬಿದ್ರೆಯ ತೆಂಗು-ತೋಪುಗಳ ನಡುವಣ ನಡಾಲಿನ ಶ್ರೀ ಕಾಡಿಯ ಶೆಟ್ಟಿ ಮತ್ತು ಶ್ರೀಮತಿ ಚಿಕ್ಕಿ ಶೆಟ್ಟಿ ದಂಪತಿಯ ಪುತ್ರರಾಗಿ 1936 ರಲ್ಲಿ ಜನಿಸಿದ ಯಕ್ಷಗಾನ ತಾಳ ಮದ್ದಳೆಯ ಹಿರಿಯ ಸಮರ್ಥ ಅರ್ಥಧಾರಿ ಕೆ. ಕೆ. ಶೆಟ್ಟಿಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿದ್ದರು. ಮುಂದಿನ ಜೀವನದ ದಾರಿಯನ್ನು ಅರಸುತ್ತಾ ಎಳವೆಯಲ್ಲಿಯೇ ಮುಂಬಯಿಗೆ ಆಗಮಿಸಿದ ಶೆಟ್ಟಿಯವರು ಮೊಗವೀರ ರಾತ್ರಿ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸಿದರು. ಕರಾವಳಿ ಕರ್ನಾಟಕದ ವಿಭಿನ್ನ ಕಲೆಯಾದ ಯಕ್ಷಗಾನವನ್ನು ಮೈಗೂಡಿಸಿಕೊಂಡು ಶ್ರೀ ಕೃಷ್ಣ ಕೃಪಾಷೋಷಿತ ಯಕ್ಷಗಾನ ಮಂಡಳಿ ರೇ ರೋಡ್‌ ವೇದಿಕೆಯ ಮೂಲಕ ಯಕ್ಷಗಾನ ದಿಗ್ಗಜ ಮಾಣಿಯೂರು ಶಂಕರ ಶೆಟ್ಟಿಯವರ ಪ್ರೇರಣೆಯೊಂದಿಗೆ ಕಲಾಜೀವನಕ್ಕೆ ಪಾದಾರ್ಪಣೆಗೈದರು.

ಕಣಂಜಾರು ಆನಂದ ಶೆಟ್ಟಿ, ಸದಾಶಿವ ಶೆಟ್ಟಿ, ಅಡ್ವೆ ವಾಸು ಶೆಟ್ಟಿ, ಬ್ರಹ್ಮಾವರ ರಘುರಾಮ ಶೆಟ್ಟಿ, ಚಿಕ್ಕಯ್ಯ ಶೆಟ್ಟಿ, ಶೇಣಿ ಶ್ಯಾಮ್‌ ಭಟ್‌, ಕೊಲ್ಯಾರು ರಾಜು ಶೆಟ್ಟಿ ಅವರಲ್ಲದೆ ಊರಿನ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್‌, ಕೊಲ್ಯೂರು ರಾಮಚಂದ್ರ ರಾವ್‌, ರಾಮದಾಸ ಸಾಮಗ ಮೊದಲಾದ ಹಿರಿಯ ಕಲಾವಿದರ ಜೊತೆಯಲ್ಲಿ ಅರ್ಥ ಹೇಳಿ ಪಳಗಿದ ಹಿರಿಮೆ ಕೆ. ಕೆ. ಶೆಟ್ಟಿಯವರದು. ಯಕ್ಷಮಿತ್ರ ಮುಂಬಯಿ ಇದರ ರೂವಾರಿಯಾಗಿ ತಾಳಮದ್ದಳೆಗಳನ್ನು ಆಯೋಜಿಸುತ್ತಾ, ಕಲಾವಿದರನ್ನು ಪ್ರೋತ್ಸಾಹಿಸಿ, ಸಮ್ಮಾನಿಸಿ, ಕಲೆಗಾಗಿ ದುಡಿದು ಕೀರ್ತಿಶೇಷರಾದ ಅನೇಕ ಮಂದಿಯನ್ನು ಇವರು ಸಂಸ್ಮರಿಸುತ್ತಿರುವುದು ಶ್ಲಾಘನೀಯ. ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ಕರ್ನಾಟಕದ ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಕೆ. ಕೆ. ಶೆಟ್ಟಿಯವರ ಕೊಡುಗೆ ಅನನ್ಯವಾದುದು.

ಅವರ ಸುದೀರ್ಘ‌ ಸೇವೆಯನ್ನು ಮನಗಂಡು ಥಾಣೆ ಪಶ್ಚಿಮದ ಕನ್ನಡ ಸಂಘ ವರ್ತಕ ನಗರ ವತಿಯಿಂದ 2010 ರಲ್ಲಿ ಆ. 17 ರಂದು ಥಾಣೆ ಪಶ್ಚಿಮದ ಹೊಟೇಲು ವುಡ್‌ಲ್ಯಾಂಡ್‌ ರಿಟ್ರೀಟ್‌ನ ಸಭಾಗೃಹದಲ್ಲಿ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ ಧುರ ವೀಳ್ಯ -ಕರ್ಣ ಭೇದನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಂದರ್ಭದಲ್ಲಿ ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉದ್ಯಮಿ ಸುಧಾಕರ ಎಸ್‌. ಹೆಗ್ಡೆ, ಸಮಾಜಸೇವಕ, ಕಲಾಪೋಷಕ ಪೊಲ್ಯ ಉಮೇಶ್‌ ಶೆಟ್ಟಿ, ಸಾಹಿತಿ ಪ್ರಾ| ಸೀತಾರಾಮ ಆರ್‌. ಶೆಟ್ಟಿ, ಉದ್ಯಮಿ ಉದಯ ಎನ್‌. ಶೆಟ್ಟಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕೆ. ಕೆ. ಶೆಟ್ಟಿಯವರನ್ನು ಸಮ್ಮಾನಿಸಲಾಗಿತ್ತು. ಕೆ. ಕೆ. ಶೆಟ್ಟಿಯವರು ದುಡಿಯುತ್ತಾ ತನ್ನ ಅನುಭವವನ್ನೇ ಬಂಡವಾಳವನ್ನಾಗಿಸಿ 1994 ರಲ್ಲಿ ಜಾಫ್ರೀಜ್‌ ಕೂಲಿಂಗ್‌ ಸಿಸ್ಟಮ್‌ ಎಂಬ ಸಂಸ್ಥೆಯನ್ನು ತೆರೆದು ಇದೀಗ ಯಶಸ್ವಿ ಉದ್ಯಮಿಯಾಗಿದ್ದಾರೆ.



ಕೃಪೆ : http://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ